ಆಡು (ಗೋಟ್)
ದನ ಕುರಿಗಳ ಹಾಗೆ ಟೊಳ್ಳು ಕೊಂಬಿನ ಸೀಳುಗೊರಸಿನ, ಮೆಲಕು ಹಾಕುವ, ದನದ ಕುಟುಂಬಕ್ಕೆ (ಬೋವಿಡೆ) ಸೇರಿದ ಸ್ತನಿ. ಕ್ಯಾಪ್ರ ಹಿರ್ಕಸ್ ವೈಜ್ಞಾನಿಕನಾಮ. ಇಬೆಕ್ಸ, ಮಾರ್ಕ್‍ಹಾರ್, ಟಾರ್, ರಾಕಿ ಪರ್ವತದ ಆಡು, ಕಾಡು ಆಡುಗಳೂ ಇದೇ ಜಾತಿಯವು. ಆಡು ಕುರಿಯ ಹತ್ತಿರ ಸಂಬಂಧಿ. ಇವೆರಡಕ್ಕೂ ತೀರ ಹತ್ತಿರದ ಹೋಲಿಕೆಗಳೂ ಕೆಲವು ವ್ಯತ್ಯಾಸಗಳೂ ಇವೆ. ಬಳಕೆಯಲ್ಲಿ ಹೆಣ್ಣು ಆಡನ್ನು ಮೇಕೆಯೆಂದೂ, ಗಂಡನ್ನು ಹೋತವೆಂದೂ ಹೇಳುವುದುಂಟು. ಆಡುಗಳಿಗೆ ಗದ್ದದ ಕೆಳಗಡೆ ಉದ್ದನೆಯ ದಾಡಿ ಇರುತ್ತದೆ: ಹೋತದಲ್ಲಿ ಇದು ಎದ್ದು ಕಾಣುತ್ತದೆ. ಹೋತದಲ್ಲಿ ಅದರಲ್ಲೂ ಬೆದೆ ಹತ್ತುವ ಕಾಲದಲ್ಲಿ ತಡೆಯಲಾಗದ ಹೊಲಸು ನಾತ ಬಡಿಯುವುದು. ಆಡಿನ ಹಣೆ ಉಬ್ಬಿದ್ದರೆ, ಕುರಿಯದು ತಗ್ಗು. ಆಡಿನ ಮೋಟು ಬಾಲ ಎತ್ತಿಕೊಂಡಿರುತ್ತದೆ; ಕುರಿಯದು ಇಳಿಬಿದ್ದಿರುವುದು. ಕುರಿಗಿಂತ ಮೇಕೆ ಚುರುಕು. ತನ್ನ ಮೇವನ್ನು ಆಡು ಚಟುವಟಿಕೆಯಿಂದ ಹುಡುಕಿ ತಿನ್ನುತ್ತದೆ. ಕುರಿ ಹಿಂಡನ್ನು ನಡೆಸಿಕೊಂಡು ಅವು ಒಂದೆಡೆಯಿಂದ ಇನ್ನೊಂದಕ್ಕೆ ಹೋಗುತ್ತಿರುವಂತೆ ಮೇವು ತಿನ್ನುವಂತೆ ಎಚ್ಚರಿಕೆಯಿಂದ ನೋಡಿಕೊಳ್ಳುತ್ತದೆ. ಕುರಿಯಂತೆ ಮೇಕೆ ಬಿಸಿಲಿಗೆ ಬಳಲುವುದಿಲ್ಲ. ಮೇಕೆ ಇಲ್ಲದಿದ್ದರೆ ಕುರಿ ಹಿಂಡುಗಳನ್ನು ನಡೆಸುವುದು ಕಷ್ಟ. ಇದರಿಂದಲೇ ಕುರಿಗಳ ಮಂದೆಯಲ್ಲಿ ಮೇಕೆ ಇದ್ದೇ ಇರುತ್ತದೆ.

ಆಡುಗಳ ತೌರುಮನೆ ನೈರುತ್ಯ ಏಷ್ಯ. ಇವು ಬಹುವಾಗಿ ಮೂಡಲ ದೇಶಗಳವು. ಪರ್ಷಿಯ ಮೂಲನಿವಾಸ ಆಗಿದ್ದಿರಬಹುದೆಂದು ಪುರಾತನ ದಾಖಲೆಗಳಿವೆ. 8-9 ಸಾವಿರ ವರುಷಗಳ ಹಿಂದೆ ಮಾನವ ಮೊದಲು ಆಡುಗಳನ್ನು ಪಳಗಿಸಿ ತನ್ನ ದಿನಜೀವನದಲ್ಲಿ ಬಳಕೆಗೆ ತಂದಿರಬಹುದು. ಹೀಗೆ ಪಳಗಿಸಿದ ಜಾತಿಗಳಿಂದ ಆಡಿನ ಇಂದಿನ ಅನೇಕ ತಳಿಗಳಾಗಿವೆ. ಕಾಡು ಆಡುಗಳು ಸ್ಪೇನ್ ದೇಶದಿಂದ ಹಿಡಿದು ಮೂಡಲದಲ್ಲಿ ಭಾರತದವರೆಗೆ, ಉತ್ತರದಲ್ಲಿ ಮಂಗೋಲಿಯ, ಸೈಬೀರಿಯ ದೇಶಗಳಲ್ಲಿ ಹರಡಿವೆ. ಮಾರ್ಕ-ಹಾರ್ ಕಾಡು ಆಡುಗಳು ಆಫ್ಘನಿಸ್ತಾನ, ಪಾಕಿಸ್ತಾನ, ಕಾಶ್ಮೀರ, ಪಡುವಣ ಹಿಮಾಲಯ ಪರ್ವತಶ್ರೇಣಿಗಳಲ್ಲಿ ವಾಸಿಸುತ್ತವೆ. ಈಜಿಪ್ಟ್, ಅಬಿಸೀನಿಯ, ಅರೇಬಿಯ, ಗ್ರೀಕ್ ದ್ವೀಪಗಳಲ್ಲೂ ಆಡುಗಳು ವನ್ಯ ಜೀವಿಗಳು.

ಸಾಮಾನ್ಯವಾಗಿ ಆಡುಗಳು ಹಳ್ಳತಗ್ಗಿನ ಕಾಡುಗಳ ಪರ್ವತ ಶ್ರೇಣಿಗಳಲ್ಲಿ ವಾಸಿಸುತ್ತವೆ. ಹಳ್ಳತಿಟ್ಟುಗಳು ಇವುಗಳಿಗೆ ಇಷ್ಟ. ಕಡಿದಾದ ಜಾಗ ಇವಕ್ಕೆ ಎಲ್ಲಿಲ್ಲದ ಚುರುಕೂ, ಜಾಣ್ಮೆ ಹುಟ್ಟಿಸುತ್ತದೆ. ಕೆಲವು ಆಡುಗಳು ಕುರುಚಲು ಗಿಡಗಳ ಮೈದಾನ, ತಗ್ಗುಗಳಲ್ಲೂ ಇರುತ್ತವೆ. 5-10 ಆಡುಗಳು ಮಂದೆಯಲ್ಲಿ ಓಡಾಡುತ್ತವೆ. ವಯಸ್ಸಾದ ಮೇಕೆಯೇ ಮಂದೆಯ ಮುಂದಾಳು. ಆಡು ಮುಟ್ಟದ ಸೊಪ್ಪಿಲ್ಲ. ಆಡು ಹೋದ ಕಾಡು ಹಾಳು ಎಂಬ ನಾಣ್ಣುಡಿ ಇದೆ. ಕುರಿಗಳಿಗೆ ಹುಲ್ಲುಗಾವಲುಗಳಲ್ಲಿ ಇರುವುದು ಇಷ್ಟವಾದರೆ, ಆಡುಗಳಿಗೆಕುರುಚಲು ಗಿಡಗಳು ಇರುವೆಡೆಗಳಲ್ಲಿ ಗಿಡದಿಂದ ಗಿಡಕ್ಕೆ ಸಾಗುತ್ತ, ಎಳೆಯ ಕುಡಿಗಳನ್ನು ಕುರುಕಿ, ಮರದ ತೊಗಟೆ ಸುಲಿದು ಹಾಳು ಕೆಡವುತ್ತ, ಮೇಯುವುದೆಂದರೆ ಆಡಿಗೆ ಬಲು ಇಷ್ಟ. ಹೀಗೆ ಬೇಸಾಯಗಾರನ ತೋಟಗಾರನ ಶತ್ರು ಆಗಿದ್ದುದರಿಂದಲೇ ಪಾಕಿಸ್ತಾನದಲ್ಲಿ ಆಡುಗಳನ್ನೇ ಒಂದು ರೀತಿಯಲ್ಲಿ ಹೆಸರಿಲ್ಲದಂತೆ ಮಾಡುವ ಯೋಜನೆ ಉಂಟಾಗಿದೆ.
ದನದ ಬಳಗಕ್ಕೆ ಸೇರಿದ ಇತರ ಪ್ರಾಣಿಗಳಂತೆ, ಆಡುಗಳಲ್ಲೂ ಮೇಲ್ದವಡೆಯ ಮುಂದುಗಡೆ ಹಲ್ಲುಗಳಿಲ್ಲ. ಹಲ್ಲುಗಳ ಅಂಕಿ, ಜೋಡಣೆ ಮಾತ್ರ ದನಗಳಲ್ಲಿ ಇದ್ದಂತಿರುವುವು. ಜಠರದಲ್ಲಿ ನಾಲ್ಕು ಚೀಲಗಳಿವೆ. ಮುಂಗಾಲು ಹಿಂಗಾಲುಗಳು ಒಂದೇ ಉದ್ದವಿಲ್ಲ. ಆಡುಗಳು 1.3-1.4 ಮೀಟರುಗಳಷ್ಟು ಉದ್ದವಾಗೂ, 0.75-1.0 ಮೀಟರಷ್ಟು ಎತ್ತರವಾಗೂ ಬೆಳೆಯಬಹುದು. ಮೇಕೆ 50.-55 ಕಿ.ಗ್ರಾಂ. ಹೋತ 75-120 ಕಿ.ಗ್ರಾಂ. ತೂಗುತ್ತದೆ. ಕೊಂಬು ಒಂದು ಸುರುಳಿ ಸುತ್ತಿರುವುದು ಸಾಮಾನ್ಯ. ಕೆಲವು ಆಡುಗಳಲ್ಲಿ ಕೊಂಬು ಒಂದು ಮೀಟರಿನಷ್ಟು ಉದ್ದ ಇರುತ್ತದೆ. ಆಡುಗಳು 8-12 ವರ್ಷ ಬದುಕಿರುತ್ತದೆ. : 18 ವರ್ಷ ಜೀವಿಸಿದ್ದೂ ಉಂಟು.

ಗರ್ಭಕ್ಕಾಗಿ ಮೈಕಟ್ಟು ಚೆನ್ನಾಗಿ ಬೆಳೆಯ ಬೇಕಾದ್ದರಿಂದ, ಮೇಕೆಗೆ 15 ಮಾಸಗಳು ಕಳೆದ ಮೇಲೆ ಹೋತ ಕೊಡಿಸಬೇಕು. ಹೋತಕ್ಕೆ ವರ್ಷ ಕಳೆವ ತನಕ ಅಷ್ಟಾಗಿ ಇದಕ್ಕಾಗಿ ಬಳಸಬಾರದು. ಮರಿ ಹಾಕಿದ ಮೇಲೆ ಮೇಕೆ ಯಾವಾಗಲಾದರೂ ಬೆದೆಗೆ ಬರಬಹುದು. ಮಾಗಿಕಾಲದಲ್ಲಿ ಬೆದೆ 3 ದಿನಗಳೂ, ವಸಂತದಲ್ಲಿ 2 ದಿನಗಳೂ, ಉಳಿದ ಕಾಲದಲ್ಲಿ ಒಂದು ದಿನವೂ ಇರುತ್ತದೆ. ಬೆದೆಗೆ ಬಂದಾಗ ವಿಪರೀತ ಚಡಪಡಿಸುತ್ತ ಜೋರಾಗಿ ಬಾಲ ಅಲುಗಾಡಿಸುತ್ತ ಒಂದೇ ಸಮನೆ ಅರಚುತ್ತಿರುತ್ತದೆ. ಕರಾವು ಸರ್ರನೆ ಇಳಿಯುತ್ತದೆ. ಹಸಿವುಗೆಟ್ಟು ಮೇವು ಮುಟ್ಟದಿರುವುದು. ಗರ್ಭಕಟ್ಟಿದ 147-154 ದಿನಗಳಾದ ಮೇಲೆ ಮರಿ ಹಾಕುತ್ತದೆ. ಒಂದು ಸಲಕ್ಕೆ ಅವಳಿ ಮರಿಗಳನ್ನು ಈಯುವುದೇ ಸಾಮಾನ್ಯ. ಗಂಡು ಮರಿ 8-12 ತಿಂಗಳುಗಳಲ್ಲಿ ಹರೆಯಕ್ಕೆ ಬರುತ್ತದೆ.

ಪಳಗಿಸಿದ ಆಡುಗಳು ಪ್ರಪಂಚದಲ್ಲಿ ಎಲ್ಲೆಲ್ಲೂ ಹರಡಿವೆ. ಉಳಿದೆಲ್ಲ ಪ್ರಾಣಿಗಳೂ ಬದುಕಲಾರದ ಎಡೆಗಳಲ್ಲೂ ಆಡನ್ನು ಚೆನ್ನಾಗಿ ಸಾಕಬಹುದು. ಮುಖ್ಯವಾಗಿ, ಹಾಲು, ಮಾಂಸ, ಕೂದಲು, ತೊಗಲು, ಗೊಬ್ಬರಗಳಿಗಾಗಿ ಇವನ್ನು ಸಾಕುವರು. ಹಾಲು ಕರೆವ ಮೇಕೆ ಬಡವನ ಆಕಳು. ಆಕಳನ್ನು ಸಾಕುವುದಕ್ಕಿಂತ ಆಡನ್ನು ಸಾಕುವುದು ಸುಲಭ. ಒಂದು ಸಂಸಾರಕ್ಕೆ ಸಾಕಾಗುವಷ್ಟು ಹಾಲನ್ನು ಒಂದೆರಡು ಮೇಕೆಗಳು ಒದಗಿಸಬಲ್ಲವು. ಆಡಿನ ಹಾಲಿನಿಂದ ಗಟ್ಟಿ ಗಿಣ್ಣು (ಚೀಸ್) ತಯಾರಾಗುತ್ತದೆ. ಅಲ್ಲದೆ, ಬೆಚ್ಚನೆಯ ತುಪ್ಪಟ ಒದಗಿಸಿ, ಗೊಬ್ಬರ ಕೊಟ್ಟು, ಆಮೇಲೆ ಪುಷ್ಟಿಕರ ಮಾಂಸಾಹಾರವಾಗಿ ಕೊನೆಗೆ ನುಣುಪಾದ ತೊಗಲನ್ನು ಕೊಡುವುದರಿಂದ, ಆಡು ಆರ್ಥಿಕವಾಗಿಯೂ ಮಾನವನಿಗೆ ಲಾಭದಾಯಕ. ಠೀವಿಯಿಂದ ಗಂಭೀರವಾಗಿ, ಹೊಸಬರಿಗೂ ಅಂಜದೆ ನಿಟ್ಟಿಸುತ್ತ, ಹೆಜ್ಜೆ ಹಾಕುವ ಹೋತಕ್ಕೆ ಹೋಲಿಸಿ, ಗಂಭೀರವಾಗಿ ಠೀವಿಯಾಗಿ ಇರುವವನಿಗೆ ಈಗಲೂ ಅರಬ್ಬರ ಹೋತನೆಂದು ಕರೆಯುವುದು ರೂಢಿ.

ಹಸುವಿನ ಹಾಲಿಗಿಂತಲೂ ಮೇಕೆ ಹಾಲು ಪುಷ್ಟಿಕರ. ಆಕಳ ಹಾಲನ್ನು ಕುಡಿದ ಮೇಲೆ ಹೊಟ್ಟೆಯಲ್ಲಿ ದಪ್ಪನಾಗಿ ಹೆಪ್ಪುಗಟ್ಟಿ ಕರಗದ ಹಾಲೊಡಕಗಳಾಗುತ್ತವೆ; ಆದರೆ ಆಡಿನ ಹಾಲು ಹೆಂಗಸರ, ಕತ್ತೆಯ ಹಾಲಿನಂತೆ ತೀರಸಣ್ಣ, ಕರಗುವ ತೆಳುವಾದ ಚಕ್ಕೆಗಳಾಗುತ್ತದೆ. ಹಸುವಿನ ಹಾಲನ್ನು ಅರಗಿಸಿಕೊಳ್ಳಲು 2 ದಿನಗಳು ಹಿಡಿದರೆ, ಮೇಕೆ ಹಾಲು ಒಂದೇ ದಿನದಲ್ಲಿ ಅರಗುವುದು. ಆಡಿನ ಹಾಲಿನ ರಚನೆ, ಅರಗಣೆ ಹೆಂಗಸರ ಹಾಲಿನಂತೆ ಇರುತ್ತವೆ. ಇದರಿಂದಲೇ ಕೂಸಿಗೆ ತಾಯಿ ಹಾಲು ಇಲ್ಲದಾಗ ಆಕಳ ಹಾಲಿಗಿಂತ ಮೇಕೆ ಹಾಲು ಒಳ್ಳೆಯದು. ಇದಕ್ಕಾಗಿ ಯೂರೋಪಿನಲ್ಲಿ ಆಡನ್ನು ಹಾಲೂಡಿಸುವ ದಾದಿ ಎನ್ನುವರು. ಹಸುವಿನ ಹಾಲು ಒಗ್ಗದವರಿಗೆ ಇದು ಸರಿಬೀಳಬಹುದು. ಆಕಳ ಹಾಲಿಗಿಂತಲೂ (3.15%) ಆಡಿನ ಹಾಲಿನಲ್ಲಿ (3.5%-5.14%) ಕೊಬ್ಬು ಹೆಚ್ಚು. ಆಕಳಿಗೆ ಕ್ಷಯವಿದ್ದರೆ ಅದರ ಹಾಲಿನ ಮೂಲಕ ಜನರಿಗೆ ಹತ್ತಬಹುದು. ಆಡಿಗೆ ಕ್ಷಯ ಹತ್ತದು. ಆಕಳ ಹಾಲು ಆಮ್ಲವಾಗಿದ್ದರೆ, ಆಡಿನದು ಕ್ಷಾರವಾಗಿರುವುದು. ಆಕಳ ಹಾಲಿಗಾಗಿ ಸಾಕಣೆಯ ಖರ್ಚು ದುಬಾರಿ. ಆಡಿನದು ತೀರ ಅಗ್ಗ, ಸುಲಭ. ಬಡವರೂ ಸಾಕುವ ಪ್ರಾಣಿ ಆಡು. ಮೇಕೆಯ ಹಾಲು ಮಹಾತ್ಮ ಗಾಂಧೀಜಿಯವರ ದಿನಬಳಕೆಯ ಅಚ್ಚುಮೆಚ್ಚಿನ ಆಹಾರವಾಗಿತ್ತು. ಅರಬ್ಬೀ ಜನರಿಗೆ ಮೇಕೆಯ ಹಾಲನ್ನು ಬಿಟ್ಟರೆ ಬೇರೆ ಹಾಲೇ ಸಿಗುವುದಿಲ್ಲ. ಅವರ ಒಂದೊಂದು ಸಂಸಾರವೂ ಆಡಿನ ಮಂದೆಯನ್ನು ಸಾಕಿರುತ್ತದೆ. ಭಾರತ, ಚೀನಾ, ಪಾಕಿಸ್ತಾನ, ಟಿಬೆಟ್, ಯೂರೋಪು, ಬ್ರಿಟಿಷ್ ದ್ವೀಪಗಳು, ಅಮೆರಿಕ, ಕೆನಡ ದೇಶಗಳಲ್ಲೂ ಕರಾವಿನ ಆಡುಗಳನ್ನು ಸಾಕುತ್ತಾರೆ. 

ಆಡಿನ ಬಗೆಗಳು : ನಾಲ್ಕು ಬಗೆಗಳನ್ನು ಗುರುತಿಸಬಹುದು.

1.ನಿಗುರಿದ ಮೋಟು ಕಿವಿಗಳ, ಕೊಂಬಿರದ, ಮಾಂಸದ ತಳಿಯಾದ ಸಾಮಾನ್ಯ ಆಡು. 
 
2. ಉದ್ದನಾಗಿ ಅಗಲಕ್ಕೆ ಜೋಲುಬಿದ್ದ ಕಿವಿಗಳ, ಕರಾವಿನ, ಸಿರಿಯಾದ, ನುಬಿಯನ್, ಇಲ್ಲವೇ ಈಜಿಪ್ಟಿನ ಆಡು. 
  
3. ಜೋಲು ಕಿವಿಗಳ, ಗುಂಗುರುಗೂದಲ ತುಪ್ಪುಳಿನ, ಕುರಿ ಮೊಗದ ಟಿಬೆಟಿನ ಅಂಗೋರ ಆಡು. 
  
4. ಅರೆಬರೆ ಜೋಲುಬಿದ್ದ ಕಿವಿಗಳ, ಮೋಟು ತುಪ್ಪುಳುಗೂದಲ, ಹಿಮಾಲಯ ಪರ್ವತಗಳ ಕಾಶ್ಮೀರಿ ಆಡು.

ಕರಾವಿನ ಆಡುಗಳು : ಇವುಗಳ ಲಕ್ಷಣಗಳಿವು: ಅಚ್ಚುಕಟ್ಟಾದ ಉದ್ದನೆಯ ತಲೆಯಲ್ಲಿ ಅಗಲದ ಹಣೆಯಂತೆ ಬರುಬರುತ್ತ ಚೂಪಾಗುವ ಮುಸುಡಿ; ತೆಳುವಾಗಿ ಮೋಟಾದ ಚೂಪು ಕೊಂಬುಗಳು; ಹೊಳೆವ ದೊಡ್ಡ ಕಣ್ಣುಗಳು; ಉದ್ದನೆಯ ದಪ್ಪಮೈಕಟ್ಟು; ಚಿಕ್ಕ ಎದೆ; ಚಾಚಿದ ರೊಂಡಿ ಮೂಳೆಗಳು; ಸಡಿಲವಾದ ಮೆತು ಚರ್ಮ; ನುಣುಪಾದ ತೆಳುಗೂದಲು; ದೂರದೂರವಿದ್ದು ಮುಂಬಾಗಿದ ಮೊಲೆ ತೊಟ್ಟುಗಳಿರುವ, ಮುಟ್ಟಲು ಸ್ಪಂಜಿನಂತೆ ಮೆತುವಾದ, ದೊಡ್ಡ ದುಂಡಾದ ಕೆಚ್ಚಲು.
ಕರಾವಿನ ಆಡುಗಳಲ್ಲಿ ಬಗೆಬಗೆಯ ತಳಿಗಳಿವೆ. ಸ್ವಿಸ್ (ಆಲ್ಪೈನ್), ನುಬಿಯನ್ ಆಡುಗಳು ಮುಖ್ಯವಾದವು. ಸ್ವಿಸ್ ಆಡಿಗೆ ಮೊನಚಾದ, ನೇರವಾದ ಕಿವಿಗಳಿರುತ್ತವೆ. ಇಂದಿಗೂ ಹೆಸರಾದ ಹೊಸ ತಳಿಗಳು ಸ್ವಿಸ್ ತಳಿಯಿಂದ ಮೂಡಿವೆ; ಇವುಗಳಲ್ಲಿ ಟಾಗೆನ್‍ಬರ್ಗ, ಸಾನೆನ್ (ಕಣಿವೆಯ) ತಳಿಗಳು ಹೆಸರಾಗಿವೆ. ಇಂಗ್ಲೆಂಡಿನಲ್ಲಿ ಒಂದು ಸಾನೆನ್ ಆಡು ವರ್ಷಕ್ಕೆ 6400 ಪೌಂಡು ಹಾಲು ಕರೆದ ದಾಖಲೆಯಿದೆ. ಅಮೆರಿಕದ ಸಂಯುಕ್ತಸಂಸ್ಥಾನಗಳಲ್ಲಿ ಜನಪ್ರಿಯವಾದ ಟಾಗೆನ್‍ಬರ್ಗ ಬಣ್ಣ ಕಪ್ಪು. ಸಾನೆನ್ ಆಡಿನ ಬಣ್ಣ ಬಿಳಿ ಇಲ್ಲವೇ ಹಾಲಿನ ಕೆನೆಯ ಹಳದಿ ಬಿಳುಪು. ಮಾಲ್ಟಾದ ಆಡುಗಳಲ್ಲಿ ಮೂಡಣ ನಾಡುಗಳ ರಕ್ತವಿದೆ. ನುಬಿಯನ್ ಆಡು ಉತ್ತರ ಆಫ್ರಿಕಕ್ಕೆ, ಮುಖ್ಯವಾಗಿ ಈಜಿಪ್ಟಿಗೆ ಸೇರಿದ್ದು. ಎಲ್ಲ ಆಡುಗಳಿಗಿಂತಲೂ ಗಾತ್ರದಲ್ಲಿ ಇದೇ ಭಾರಿ. ಬೆಣ್ಣೆಗಾಗಿನ ಕರಾವಿನಲ್ಲಿ ನುಬಿಯನ್ ತಳಿಯ ಆಡನ್ನು ಮೀರಿಸಿದ್ದು ಇನ್ನೊಂದಿಲ್ಲ. ಇಂಗ್ಲೆಂಡಿನಲ್ಲಿ ಒಂದು ವರ್ಷದಲ್ಲಿ ಇಂಥದೊಂದು 4250 ಪೌಂಡು ಹಾಲು ಕರೆದಿದೆ. ಬೆಣ್ಣೆ ಕೂಡ ಹೆಚ್ಚಾಗಿರುವುದು. ನೀಳವಾಗಿ ಅಗಲವಾಗಿ ಜೋಲು ಬೀಳುವ ಕಿವಿಗಳು ಇದರ ಲಕ್ಷಣ. ಇಸ್ರೇಲ್, ಸಿರಿಯಾಗಳ ಆಡುಗಳಿಗೆ ದೊಡ್ಡ ಜೋಲು ಕಿವಿಗಳೂ, ಕೂದಲೂ ಇರುತ್ತವೆ. ಇವು ಕಪ್ಪಾಗಿರುವುದೇ ಸಾಮಾನ್ಯ. ನುಬಿಯನ್ ಮತ್ತಿತರ ಜೋಲು ಕಿವಿಗಳ ತಳಿಗಳು ಇಂಗ್ಲೆಂಡಿಗೆ 1850ರಿಂದೀಚೆಗೆ ಬೇರೆ ಬೇರೆ ದಾರಿಗಳಿಂದ ಸಾಗಿಹೋದುವು. ಪರ್ಷಿಯದವು, ಭಾರತದವು. ಸಿರಿಯಾದವು ಎಂಬ ಈ ಆಡುಗಳು ಇಂಗ್ಲೆಂಡಿನಲ್ಲಿ ದಾಖಲೆಯಾಗಿರುವ ಆಂಗ್ಲೋ ನುಬಿಯನ್ ಹೊಸ ತಳಿಯ ಹುಟ್ಟಿಗೆ ಕಾರಣವಾಗಿದೆ. ಇದೇ ತಳಿ ಅಮೆರಿಕದಲ್ಲಿ ನುಬಿಯನ್ ಎಂದೇ ಜನರ ಮೆಚ್ಚಿಕೆಯಾಗಿದೆ. 

ಗದ್ದಿ, ಮಧ್ಯಪ್ರದೇಶ, ಮಲಬಾರ್, ಕಂಚಿ, ಜಮುನಾಪುರಿ ಗದ್ದಿ, ಗದ್ದಿ ಅಂಗೋರಗಳ ಅಡ್ಡ ತಳಿ-ಸೂರತ್ ಈ ತಳಿಗಳು ಭಾರತದಲ್ಲಿ ಹೆಸರಾದುವು. ಬಂಗಾಳ, ಯಮುನಾ ನದಿಯ ತೀರಪ್ರದೇಶಗಳಿಂದ ಬಂದ ಜಮುನಾಪುರಿ ಭಾರತದ ಮೇಕೆ ತಳಿಗಳಲ್ಲೆಲ್ಲ ಭಾರಿಯಾದದ್ದು. ಸರಾಸರಿ 45-70 ಕಿ.ಗ್ರಾಂ ತೂಗುತ್ತದೆ. ಸುಲಭವಾಗಿ ಎಲ್ಲೆಡೆ ಒಗ್ಗಿಕೊಳ್ಳುತ್ತದೆ. ಇದರ ಬೆಲೆ ಹೆಚ್ಚು. ಉದ್ದನೆಯ ಗಿಳಿಮೂಗು, ಜೋಲು ಬಿದ್ದ ನೀಳ ಕಿವಿಗಳು, ಈ ತಳಿಯ ಲಕ್ಷಣಗಳು. ಬಿಳಿ, ಕರಿ ಪಟ್ಟೆಗಳಿರುವ ಮೈಬಣ್ಣ. ಒಂದು ಬಾರಿಗೆ ಈಯುವುದು ಒಂದೇ ಮರಿ. ಕರಾವಿನಲ್ಲಿ ಅಷ್ಟು ಹೆಸರಾಗಿಲ್ಲ. ಗುಜರಾತಿನ ಸೂರತ್ ಜಿಲ್ಲೆಯ, ಸಣ್ಣದಾಗಿ ಅಡಕವಾದ ಮೈಯ ಸೂರತಿ ತಳಿ ಅಷ್ಟಿಷ್ಟು ಹಾಲು ಕೊಡುವುದಕ್ಕಾಗಿ ಸಾಕುವುದುಂಟು. ಬಣ್ಣ ಬಿಳಿ, ಕೊಂಬಿಲ್ಲ. ಒಂದು ಬಾರಿಗೆ ಎರಡು, ಮೂರು, ಐದು ಮರಿಗಳನ್ನೂ ಹಾಕುವುದುಂಟು. ದಕ್ಷಿಣ ಭಾರತದ ವಿಶೇಷ ತಳಿ, ಮಲಬಾರ್. ಸಾಧಾರಣ ಮೇಕೆಗಿಂತ ಹೆಚ್ಚು ಹಾಲು ಕೊಡುತ್ತದೆ. ಕರಾವು, ಮಾಂಸಗಳಿಗಾಗಿ ಸಾಕುವ ಇನ್ನೊಂದು ಮೇಕೆ ತಳಿ ಕಂಚಿ.
ನಮ್ಮ ಕಾಶ್ಮೀರಿ, (ತುರ್ಕಿಯ ಅಂಗೋರಾ ಜಿಲ್ಲೆಯ) ಅಂಗೋರಾ ತಳಿಗಳು ಮುಖ್ಯವಾಗಿ ತುಪ್ಪಟಕ್ಕಾಗಿ ಸಾಕುವ ಆಡುಗಳು; ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ, ಅಮೆರಿಕ ಸಂಯುಕ್ತಸಂಸ್ಥಾನಗಳು, ಕೆನಡಾಗಳಲ್ಲಿ ಅಂಗೋರಾಗಳನ್ನು ಸಾಕುವರು. ಇವು ಹಾಲು ಕರೆಯುವುದು ಕಡಿಮೆ. ಇವು ಒಣ ಹವೆಗೆ ಒಗ್ಗಿದರೂ, ಚಳಿಯನ್ನು ತಡೆಯಬಲ್ಲವು. ಕೊಂಬುಗಳು ಚಪ್ಪಟೆಯಾಗಿ, ಹಿಂಬಾಗಿ, ಸುರುಳಿಯಾಗಿರುತ್ತವೆ. ಕೂದಲು ಅಚ್ಚ ಬಿಳುಪು, ರೇಶಿಮೆಯಷ್ಟು ಮೆತು, ನುಣುಪು; ಮುಕ್ಕಾಲು ಭಾಗ ಕಾಲುಗಳು, ಹಾಗೂ ಮೈಯ ತುಂಬ ಗುಂಗುರುಗುಂಗುರಾಗಿ ಬೆಳೆದಿರುತ್ತವೆ. 4"-6" ಉದ್ದ ಬೆಳೆವ ತುಪ್ಪಳವನ್ನು ಆರು ತಿಂಗಳಿಗೊಮ್ಮೆ ಕತ್ತರಿಸಿ ತೆಗೆಯುವರು. ವರ್ಷದ ಕೊನೆಯ ತನಕ ಕತ್ತರಿಸದಿದ್ದರೆ, 8"-12" ಉದ್ದ ಬೆಳೆಯುತ್ತದೆ. ವಸಂತಕಾಲದಲ್ಲಿ ತುಪ್ಪಳವನ್ನು ಕತ್ತರಿಸದಿದ್ದರೆ ಬೇಸಗೆಯಲ್ಲಿ ತಾನಾಗೇ ಉದುರಿಹೋಗುತ್ತದೆ ಅಂಗೋರಾ ಆಡಿನ ಹೊಳಪಿನ ಕೂದಲ ನೂಲಿಗೆ ಮೊಹೇರ್ ಎಂದು ಹೆಸರು. ಇದರಿಂದ ಬೇಸಗೆಯಲ್ಲಿ ತೊಡುವ ತೆಳುವಾದ ಉಣ್ಣೆಯ ಉಡುಪನ್ನು ತಯಾರಿಸುತ್ತಾರೆ. ನೀಳ ಕೂದಲುಗಳಿಂದ ನಾಟಕ ಶಾಲೆಯ ಚೌರಿ, ಕೃತಕ ತಲೆಗೂದಲು, ಟೋಪಿ ಮುಂತಾದ ವೇಷ, ಅಲಂಕಾರಗಳ ವಸ್ತುಗಳು ತಯಾರಾಗುತ್ತವೆ.

ಕಾಶ್ಮೀರದ ಶಾಲಿಗೆ ಲೋಕಕ್ಕೆ ಹೆಸರಾಗಿರುವ ಕಾಶ್ಮೀರಿ ಆಡು, ಉಣ್ಣೆಯನ್ನು ಒದಗಿಸುವ ಇನ್ನೊಂದು ಬಗೆಯ ಆಡು. ಇದು ಅಂಗೋರಾಕ್ಕಿಂತ ಸಾಮಾನ್ಯ ಆಡನ್ನು ಹೋಲುತ್ತದೆ. ಬೇರೆ ಯಾವ ಆಡುಗಳಲ್ಲೂ ಈ ತಳಿಯ ಸಾಕಣೆ ಕೈಗೂಡಿಲ್ಲ. ಕಾಶ್ಮೀರದಲ್ಲಿ ಹಿಮಾಲಯದ ಇಳಿಜಾರು ತಪ್ಪಲುಗಳಲ್ಲಿ ಕಾಣಬರುತ್ತವೆ. ಅಲ್ಲಿ ಮಾತ್ರ ಇವನ್ನು ಸಾಕಬಹುದು. ಅಂಗೋರಾ ಆಡನ್ನು ಹೋಲುವ, ಇವುಗಳ ಕೂದಲು ಕೆಲಸಕ್ಕೆ ಬಾರದವು; ಅವುಗಳ ಬುಡದಲ್ಲಿ ಬೆಳೆವ ಪಾಷಂ ಎಂಬ ಬಲು ನುಣುಪಿನ ತೆಳುವಾದ ತುಪ್ಪುಳ ಬಲು ಬೆಲೆಯಾದ್ದು. ಈ ಪಾಷಂನಿಂದಲೇ ಬೆಲೆ ಬಾಳುವ ಸುಂದರವಾದ ಕಾಶ್ಮೀರಿ ಶಾಲುಗಳು ತಯಾರಾಗುವುದು. ಒಂದು ವರ್ಷಕ್ಕೆ ಒಂದು ಆಡಿನಿಂದ ದೊರೆವ ಉಣ್ಣೆಯ ಸರಾಸರಿ ತೂಕ ಸುಮಾರು 1 ಕಿ.ಗ್ರಾಂ. ಒಂದು ಸೊಗಸಾದ ಶಾಲನ್ನು ತಯಾರಿಸಲು ಮೂವರು ನೇಯ್ಗೆಯವರಿಗೆ 3 ತಿಂಗಳು ಹಿಡಿಯುತ್ತದೆ.

ಆಡಿನ ತೊಗಲನ್ನು ಹದ ಮಾಡಿ, ಜೋಡು, ಕೈಗವುಸು ಮುಂತಾದ ಅನೇಕ ಬಗೆಯ ವಸ್ತುಗಳನ್ನು ತಯಾರಿಸುತ್ತಾರೆ. ಮೊರಾಕೊ ತೊಗಲು ಹೆಸರುವಾಸಿ.

ಸಾಕಣೆ: ಆಡನ್ನು ಕಟ್ಟುವೆಡೆ ಚಾವಣಿ, ಗೋಡೆ, ನೆಲಗಳಲ್ಲಿ ಇನಿತೂ ತೇವಗೂಡಬಾರದು. ಚೆನ್ನಾಗಿ ಗಾಳಿಯಾಡುತ್ತಿದ್ದರೇ ಆಡುಗಳಿಗೆ ಆರೋಗ್ಯ. ಬಿರುಗಾಳಿ ತಂಗಾಳಿ ಬೀಸುವಂತಿರಬಾರದು. ಆಡುಗಳು ತಂಗುವ ಜಾಗದಲ್ಲಿ ಕೆಳಗೆ ಒಣಹುಲ್ಲು ಹಾಸಿರಬೇಕು. ಕಟ್ಟುವ ಜಾಗವನ್ನು ಬದಲಾಯಿಸುತ್ತಿದ್ದರೆ, ಹುಳುಗಳು ಹತ್ತವು. ಆಡುಗಳ ಕೊಟ್ಟಿಗೆ ದನಗಳದಷ್ಟು ದೊಡ್ಡದಿರಬೇಕಿಲ್ಲ. ಮೇವೂ ಕಡಿಮೆ. ಕಾಳುಗಳು (15%), ಸೊಪ್ಪು, ಹುಲ್ಲು, ಒಳ್ಳೆಯ ಮೇವು. ಉಪ್ಪು ನೀರು ಸಾಕಷ್ಟು ಕೊಡಬೇಕು.

ಆಡಿನ ರೋಗಗಳು : ತೇವ, ಚಳಿಗಳಿಗೆ ಒಡ್ಡಿದಾಗ ಬರುವುದು ಫುಪ್ಪಸುರಿತ (ನ್ಯುಮೋನಿಯ). ಆಡಿಗೂ ಒಂದು ತೆರನಾದ ಸಿಡುಬು ಹತ್ತುವುದು. ಸೋಂಕು ಹತ್ತಿಸಿ ಮೈಯಿಳಿಸುವ (ಬ್ರೂಸೆಲ್ಲ ಬೇನೆ ಬ್ರೂಸೆಲ್ಲೋಸಿಸ್) ಆಡಿನ ಜ್ವರ. ಉಳಿದವು: ವಿಷಕಣದಿಂದಾಗುವ ಕುಂಟುವಂತೆ ಮಾಡುವ ಕಾಲು ಜಿರಸು (ಫುಟ್‍ರಾಟ್); ಕಣ್ಣುನೋವಿನ ಸೋಂಕು; ಅಂಟುರೋಗವಾದ ಆಡುಕಜ್ಜಿ; ಮೈಮೇಲೆ ಕೂರೆಗಳು, ಉಣ್ಣೆಗಳು; ಕರುಳ ಹುಳು; ಲಾಡಿಹುಳು; ಈಲಿ ಚಪ್ಪಟೆಕ್ರಿಮಿ (ಲಿವರ್ ಫ್ಲೂಕ್).
(ಕೆ.ಎಂ.ಕೆ.; ಎಚ್.ಆರ್.ಸಿ.)

ಆಡುಗಳಿಗೆ ಬರುವ ಅಂಟುರೋಗಗಳಲ್ಲಿ ಬೊಬ್ಬೆರೋಗ, ದೊಡ್ಡ ರೋಗ, ನರಡಿರೋಗ ಮೊದಲಾದವು ಮುಖ್ಯವಾದುವು. ಇವು ಬಹು ಸೂಕ್ಷ್ಮವಾದ ಸಾಂಕ್ರಾಮಿಕ ರೋಗಾಣುಗಳಿಂದ ಬರುತ್ತವೆ. ಸಕಾಲದಲ್ಲಿ ಚುಚ್ಚುಮದ್ದು ಕೊಟ್ಟು ರೋಗ ಬಾರದಂತೆ ತಡೆಯಬಹುದು. ರೋಗ ತಗುಲಿದ ಅನಂತರ ಔಷಧೋಪಚಾರ ಪರಿಣಾಮಕಾರಿಯಲ್ಲ. ಅವಕ್ಕೆ ಬರುವ ಸಾಮಾನ್ಯರೋಗಗಳಲ್ಲಿ ಜೀರ್ಣಾಂಗಗಳಿಗೆ ಸಂಬಂಧಿಸಿದ ಅಜೀರ್ಣ, ಹೊಟ್ಟೆಯುಬ್ಬರ, ಭೇದಿ, ರಕ್ತಭೇದಿ ಮೊದಲಾದವು ಶ್ವಾಸಕಾಂಗಗಳಿಗೆ ಸಂಬಂಧಪಟ್ಟ ಕೆಮ್ಮು, ಫುಪ್ಪುಸರೋಗಗಳೂ ಮುಖ್ಯವಾದುವು. ಸಕಾಲದಲ್ಲಿ ಚಿಕಿತ್ಸೆ ಮಾಡುವುದರಿಂದ ಇವು ಗುಣವಾಗುತ್ತವೆ. ಇನ್ನು ಪರೋಪಜೀವಿಗಳಿಂದ ಉಂಟಾಗುವ ಕಾರಲು ರೋಗ ಮತ್ತು ಚರ್ಮ ರೋಗಗಳನ್ನು ಯುಕ್ತ ಚಿಕಿತ್ಸೆಯಿಂದ ಗುಣಪಡಿಸಿ ಅವುಗಳಿಂದಾಗುವ ಹಾನಿಗಳನ್ನು ತಪ್ಪಿಸಬಹುದು.									
(ಪಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ